ಬೆಂಗಳೂರಿಗೆ ಪ್ರೇಯಸಿ ನೋಡಲು ಬಂದಿದ್ದ ಹರಿಯಾಣ ಮೂಲದ ಶಂಕಿತ ಮಾವೋವಾದಿಯ ಬಂಧನ ಬಂಧಿತ ಆರೋಪಿಯನ್ನು 35 ವರ್ಷದ ಅನಿರುದ್ಧ್ ರಾಜನ್ ಎಂದು ಗುರುತಿಸಲಾಗಿದ್ದು, ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು ಮತ್ತು ಟ್ಯಾಬ್ಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು: ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಹರಿಯಾಣ ಮೂಲದ ಶಂಕಿತ ಮಾವೋವಾದಿಯೊಬ್ಬನನ್ನು ಲಾಡ್ಜ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು 35 ವರ್ಷದ ಅನಿರುದ್ಧ್ ರಾಜನ್ ಎಂದು ಗುರುತಿಸಲಾಗಿದ್ದು, ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು ಮತ್ತು ಟ್ಯಾಬ್ಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಅನಿರುದ್ಧ್ ಅವರು ಖಾಸಗಿ ಕಾರ್ಯದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಅವರು ನಿಷೇಧಿತ ಎಡಪಂಥೀಯ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಆತನನ್ನು ಬಂಧಿಸಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ' ಎಂದು ತಿಳಿಸಿದ್ದಾರೆ."ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಪ್ರಸ್ತುತ, ತನಿಖೆಯು ಆತನ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿದೆ" ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.ಮೂಲಗಳ ಪ್ರಕಾರ, ಸಿಪಿಐ ಮಾವೋವಾದಿಗಳ ಪರವಾಗಿ ಅನಿರುದ್ಧ್ ಕೆಲಸ ಮಾಡುತ್ತಿದ್ದು, ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ, ಸೆಂಟ್ರಲ್ ಸಿಟಿ ಕ್ರೈಂ ಬ್ರಾಂಚ್(ಸಿಸಿಬಿ)ನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಅನಿರುದ್ಧ್ ನನ್ನು ಬಂಧಿಸಿದೆ.ಹರಿಯಾಣದಿಂದ ಬಂದ ನಂತರ, ಅನಿರುದ್ಧ್ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‌ನಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ ಚೆನ್ನೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಮೆಜೆಸ್ಟಿಕ್ ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.ಆರೋಪಿಯು ತನ್ನ ಗೆಳತಿಯನ್ನು ಭೇಟಿಯಾಗಲು ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ, ವಿಕಾಸ್ ಘಾಡ್ಗೆ ಹೆಸರಿನಲ್ಲಿ ನಕಲಿ ಆಧಾರ್ ಗುರುತಿನ ಚೀಟಿಯನ್ನು ಹೊಂದಿದ್ದು,ಪೊಲೀಸರು ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.